ನಾಯ್ಡು, ಸರೋಜಿನಿ
	1879-1949. ಭಾರತದ ಕೋಗಿಲೆಯೆಂದು ಮಹಾತ್ಮಗಾಂಧಿಯವರಿಂದ ಕರೆಸಿಕೊಂಡ ಖ್ಯಾತ ಕವಯಿತ್ರಿ, ವಾಗ್ಮಿ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ವೀರರಮಣಿ. ಹುಟ್ಟಿದ್ದು 1879 ನೆಯ ಫೆಬ್ರುವರಿ 13 ನೆಯ ದಿನಾಂಕ, ಆಗಿನ ನೈಜಾಂ ರಾಜ್ಯದ ಹೈದರಾಬಾದಿನಲ್ಲಿ. ತಂದೆ ಅಘೋರನಾಥ ಚಟ್ಟೋಪಾಧ್ಯಾಯ. ತಾಯಿ ವರದಸುಂದರಿದೇವಿ. ಹೈದರಾಬಾದಿನಲ್ಲಿ ಶಿಕ್ಷಣಕ್ಷೇತ್ರದ ಪಿತನೆಂದು ಜನಪ್ರಿಯರಾದ ಅಘೋರನಾಥರು ಸಂಸ್ಕøತ ಪಾಂಡಿತ್ಯಕ್ಕೆ ಹೆಸರಾದ ಬಂಗಾಳದ ಚಟರ್ಜಿ ಮನೆತನದವರು. ಸ್ವತಃ ಸಂಸ್ಕøತ ವಿದ್ವಾಂಸರು. ಇಂಗ್ಲಿಷ್, ಗ್ರೀಕ್ ಮತ್ತು ಹೀಬ್ರು ಭಾಷೆಗಳಲ್ಲಿ ಪರಿಣತರು. ವಿಜ್ಞಾನದಲ್ಲಿ ಅತೀವ ಆಸಕ್ತಿ ಇಟ್ಟಿದ್ದ ಅವರು ನಿಜಾಂ ಕಾಲೇಜಿನ ಪ್ರಿನ್ಸಿಪಾಲರಾಗಿ ಬಂದು ಆ ರಾಜ್ಯದಲ್ಲಿ ಶಿಕ್ಷಣಕ್ಕೆ ಬುನಾದಿ ಹಾಕಿದರು. ತಾಯಿ ವರದಸುಂದರಿಯೂ ಸಾಕಷ್ಟು ವಿದ್ಯಾವಂತೆ. ಬಂಗಾಳಿಯಲ್ಲಿ ಅನೇಕ ಕವಿತೆ ಬರೆದಿದ್ದಾರೆ. ಅಘೋರನಾಥರಿಗೆ ಎಂಟು ಮಕ್ಕಳು. ಅವರಲ್ಲಿ ನಾಲ್ಕು ಗಂಡು. ನಾಲ್ಕು ಹೆಣ್ಣು.  ಸರೋಜಿನಿದೇವಿಯೇ ಹಿರಿಯ ಮಗಳು. ಈಕೆಯ ತಮ್ಮ ಪ್ರಸಿದ್ಧ ಕವಿ ಹರೀಂದ್ರನಾಥ. ಈಕೆಯ ಮೊದಲ ಪಾಠ ತಾಯಿಯಿಂದಲೇ ಆಯಿತು. ತನಗೆ ತಿಳಿದಿದ್ದ ಸತ್ಪುರುಷರ ಕಥೆಗಳನ್ನೆಲ್ಲ ತಾಯಿ ಹೇಳಿದ್ದಲ್ಲದೆ. ಮಗಳಿಗೆ ಬಂಗಾಳೀ ಕವಿತೆಗಳ ರುಚಿ ಹತ್ತಿಸಿದಳು. ಬಾಲ್ಯದಲ್ಲಿ ದೊರೆತ ಈ ಕಾವ್ಯಾಭಿರುಚಿಯೇ ಮುಂದೆ ಈಕೆಯ ಕಾವ್ಯೋದ್ಯೋಗಕ್ಕೆ ಬುನಾದಿಯಾಯಿತು. ಅಘೋರನಾಥರ ಮನೆ ಬಹುಭಾಷಾ ಕೇಂದ್ರವಾಗಿತ್ತು. ಹಿರಿಯರೊಡನೆ ಬಂಗಾಳಿ, ಇಂಗ್ಲಿಷ್, ಮಕ್ಕಳೊಡನೆ ಹಿಂದುಸ್ತಾನಿ, ಸೇವಕರೊಡನೆ ತೆಲುಗು. ತಂದೆತಾಯಿಗಳು ಇಂಗ್ಲಿಷ್ ಹೊರತು ಬೇರೆ ಭಾಷೆಯಲ್ಲಿ ಮಾತೇ ಆಡುತ್ತಿರಲಿಲ್ಲ - ಹೀಗೆ ಈಕೆಗೆ ಅನೇಕ ಭಾಷೆಗಳ ಸಂಪರ್ಕ ಲಭಿಸಿತು.

	ಈಕೆ ಗಣಿತಶಾಸ್ತ್ರಜ್ಞಳೋ ವಿಜ್ಞಾನಿಯೋ ಆಗಬೇಕೆಂದು ತಂದೆಯ ಇಚ್ಚೆಯಾಗಿತ್ತು. ಆದರೆ ತಾಯಿಯಿಂದ ಪಡೆದ ಕವಿತಾಕೌಶಲದ ಕೈ ಮೇಲಾಯಿತು. ತಲೆ ಚಚ್ಚಿಕೊಂಡರೂ ಬೀಜಗಣಿತ ಬಾರದ ತಲೆಯಲ್ಲಿ ಕವಿತೆ ಮೂಡಿತು. ಹದಿಮೂರನೆಯ  ವಯಸ್ಸಿನಲ್ಲಿಯೇ ಇಂಗ್ಲಿಷ್‍ನಲ್ಲಿ 1,400 ಸಾಲುಗಳ ನೀಳ್ಗವನ ಹಾಗೂ ಒಂದು ನಾಟಕ ಬರೆದಳು. ಹದಿನಾಲ್ಕರಿಂದ ಹದಿನಾರು ವರ್ಷಗಳ ವಯಸ್ಸಿನಲ್ಲಿ ಅನೇಕ ಗ್ರಂಥಗಳನ್ನು ಓದಿಮುಗಿಸಿದ್ದಲ್ಲದೆ ಒಂದು ಕಾದಂಬರಿಯನ್ನೂ ಬರೆದಳು.

	ಶಾಲೆಯಲ್ಲಿ ಸರೋಜಿನಿಯ ದ್ವಿತೀಯ ಭಾಷೆ ಪರ್ಷಿಯನ್ ಆಗಿತ್ತು. ಹೈದರಾಬಾದಿನಲ್ಲಿ ಆಗ ಸರಿಯಾದ ಪ್ರೌಢಶಾಲೆ ಇಲ್ಲದ ಕಾರಣ ಈಕೆಯನ್ನು ಮದ್ರಾಸಿಗೆ ಕಳಿಸಲಾಯಿತು. ಅಲ್ಲಿ ಮೆಟ್ರಿಕ್ ಪರೀಕ್ಷ್ಷೆಯಲ್ಲಿ ಈಕೆಗೇ ಪ್ರಥಮ ಸ್ಥಾನ ದೊರೆಯಿತು. ಹೆಣ್ಣು ಮಗಳೊಬ್ಬಳು ಇಂಥ ಉಚ್ಚ ಸ್ಥಾನ ಪಡೆದುದು ಆಗ್ಗೆ ಎಲ್ಲರಿಗೂ ಆಶ್ಚರ್ಯದ ವಿಷಯವಾಗಿತ್ತು. ಆಗ ಈಕೆಗೆ ಕೇವಲ 12 ವರ್ಷ.

	ಅನಂತರ ಆರೋಗ್ಯ ಸರಿಯಾಗಿಲ್ಲದ ಕಾರಣ ಸರೋಜಿನಿ ಕಾಲೇಜಿಗೆ ಸೇರದೆ ಡಾಕ್ಟರರ ಸಲಹೆಯಂತೆ ವಿಶ್ರಾಂತಿಗಾಗಿ ಮನೆಯಲ್ಲುಳಿದಳು. ಈಕೆ ಬರೆದ ನಾಟಕವನ್ನು ನೈಜಾಮರು ಓದಿ ಸಂತೋಷಪಟ್ಟು ವರ್ಷಕ್ಕೆ ಮುನ್ನೂರು ಪೌಂಡು ವಿದ್ಯಾರ್ಥಿ ವೇತನ ಕೊಡುವುದಾಗಿ ಹೇಳಿ ಈಕೆಯನ್ನು ವಿದೇಶದಲ್ಲಿ ವ್ಯಾಸಾಂಗಕ್ಕೆ ಕಳಿಸಲು ಸೂಚಿಸಿದರು. ಹದಿನಾರು ವರ್ಷದ ಸರೋಜಿನಿ ಇಂಗ್ಲೆಂಡಿಗೆ ತೆರಳಿದಳು. ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಲು ಕನಿಷ್ಠ ಹದಿನೆಂಟು ವರ್ಷ ವಯೋಮಿತಿಯಿದ್ದ ಕಾರಣ ಎರಡು ವರ್ಷ ಈಕೆ ಅಲ್ಲಿನ ಪ್ರಸಿದ್ಧ ಕವಿಗಳ ಭೇಟಿ ಮಾಡುತ್ತ ಮತ್ತು ವಿಶೇಷ ಉಪನ್ಯಾಸಗಳನ್ನು ಕೇಳುತ್ತಾ ಕಾಲಕಳೆದಳು. ಕೇಂಬ್ರಿಜ್ಜಿನ ಗಿರ್ಟನ್ ಕಾಲೇಜು ಸೇರಿದ ಮೇಲೆ ಅಲ್ಲಿಯ ಯಾಂತ್ರಿಕ ಜೀವನ ಈಕೆಗೆ ಹಿಡಿಸಲಿಲ್ಲ. ವಿದ್ಯಾಭ್ಯಾಸವನ್ನು ಅಲ್ಲಿಗೇ ಮುಗಿಸಿ ಆರೋಗ್ಯ ಸುಧಾರಣೆಗಾಗಿ ಇಟಲಿ ಸ್ವಿಟ್ಜರ್‍ಲೆಂಡ್‍ಗಳಿಗೆ ತೆರಳಿ ಯೂರೋಪಿನ ಪ್ರಾಚೀನ ಸ್ಥಳಗಳನ್ನೆಲ್ಲ ಸಂದರ್ಶಿಸಿ ಮಾತೃಭೂಮಿಗೆ ಹಿಂತಿರುಗಿದಳು.

	ಇಂಗ್ಲೆಂಡಿನಲ್ಲಿದ್ದ ಮೂರು ವರ್ಷಗಳಲ್ಲಿ ಸರೋಜಿನಿಗೆ ಎಡ್ಮಂಡ್ ಗಾಸ್, ಆರ್ತರ್ ಸೈಮನ್, ಹೀನ್‍ಮನ್‍ರಂಥ ಅನೇಕ ಕವಿ, ವಿಮರ್ಶಕರ ಪರಿಚಯವಾಯಿತು. ಎಡ್ಮಂಡ ಗಾಸ್ ಈಕೆಯ ಕವಿತೆಗಳನ್ನು ನೋಡಿ "ಚೆನ್ನಾಗಿವೆ, ಆದರೆ ಕೃತಕ. ನಿನ್ನ ನಾಡಿನ ಜನರ ಜೀವನದ ಬಗ್ಗೆ ಕವನ ಕಟ್ಟು, ಭಾರತದ ಕೋಗಿಲೆಯಾಗು, ಇಂಗ್ಲೀಷ್ ಸಾಹಿತ್ಯದ ಅರಗಿಣಿಯಾಗಬೇಡ" ಎಂದು ಹೇಳಿದನಂತೆ.

	ಬ್ರಾಹ್ಮಣವಂಶದ ಈಕೆ ವಿದೇಶಕ್ಕೆ ಹೋಗುವ ಮೊದಲೇ ಗೋವಿಂದರಾಜು ಎಂಬ ನಾಯ್ಡು ಮನೆತನದ ಯುವಕನನೊಂದಿಗೆ ಸ್ನೇಹ ಬೆಳಸಿದ್ದುದು ತಂದೆತಾಯಿಗಳಿಗೂ ಗೊತ್ತಿತ್ತು. ಶೂದ್ರನಾದರೂ ಆತ ಶ್ರೀಮಂತ ಮನೆತನದವ, ವೈದ್ಯ. ಇವರ ಪ್ರೇಮದ ಗಾಢತೆಯನ್ನು ಗಮನಿಸಿದ ತಂದೆತಾಯಿಗಳು ಇವರ ವಿವಾಹಕ್ಕೆ ಒಪ್ಪಿದರು. 1898 ನೆಯ ಡಿಸೆಂಬರ್ ತಿಂಗಳಲ್ಲಿ ವಿವಾಹ ಜರುಗಿತು. ಗಂಡನೊಂದಿಗೆ ಬೇರೆ ಸಂಸಾರ ಹೂಡಿದಳು. ನಾಲ್ಕು ಮಕ್ಕಳ ತಾಯಿಯೂ ಆದಳು.
ಸರೋಜಿನಿಯ ಆರೋಗ್ಯ ಯಾವಾಗಲೂ ನಾಜೂಕು. ನಾಳೆಯೇ ಸಾಯುವೆನೇನೋ ಎಂಬ ನಿರಾಶೆ. ಆದರೂ ಬದುಕಲೇಬೇಕೆಂಬ ಧೈರ್ಯ, ಸಂಕಲ್ಪ. ಉತ್ತಮ ಊಟ, ಬಟ್ಟೆ, ಶೃಂಗಾರ ಎಲ್ಲದರಲ್ಲೂ ಅಭಿರುಚಿ, ರಾಜಠೀವಿ, ಅಹಂಕಾರವಿಲ್ಲದ ಗಾಂಭೀರ್ಯ, ಸೌಂದರ್ಯದ ಉಪಾಸನೆ, ವರ್ಣಮಯ ಪ್ರಪಂಚದಲ್ಲಿ ಆಸಕ್ತಿ. ಇವೆಲ್ಲಾ ಕವಿ ಹೃದಯಕ್ಕೆ ಪುಟಕೊಟ್ಟವು. ಈಕೆಯಿಂದ ಉತ್ಕøಷ್ಟ ಕವಿತೆಗಳು ಹೊರಬಂದವು. ಎಡ್ಮಂಡ್ ಗಾಸ್‍ನ ಸಲಹೆ ಕಾರ್ಯರೂಪಕ್ಕೆ ಬಂತು. ಗೊಲ್ಡನ್ ತ್ರೆಷೋಲ್ಡ್ (ಚಿನ್ನದ ಹೊಸ್ತಿಲು) ಎಂಬ ಮೊದಲ ಕವನ ಸಂಕಲನ 1905ರಲ್ಲಿ ಪ್ರಕಟವಾಯಿತು. ಆರ್ತರ್ ಸೈಮನ್ ಇದಕ್ಕೆ ಮುನ್ನುಡಿ ಬರೆದ. ದಿ ಬರ್ಡ್ ಆಫ್ ಟೈಮ್ (ಕಾಲದ ಪಕ್ಷಿ) 1912 ರಲ್ಲಿಯೂ ದಿ ಬ್ರೋಕನ್ ವಿಂಗ್ (ಮುರಿದ ರೆಕ್ಕೆ) 1915 ರಲ್ಲಿಯೂ ಪ್ರಕಟವಾದುವು. ಈ ಕವಿತೆಗಳ ವಸ್ತು ಭಾರತೀಯ. ಪಲ್ಲಕ್ಕಿ ಹೊರುವವರು (ವಧು ಗಂಡನ ಮನೆಗೆ ಹೋಗುವ ದೃಶ್ಯ), ಭಾರತದ ನೇಯ್ಗೆಯವರು, ಬೆಸ್ತರು, ಅನಾಥ ಬಾಲಕ, ನನ್ನ ಮಕ್ಕಳಿಗೆ, ಭಾರತಕ್ಕೆ ಮುಂತಾದ ಶೀರ್ಷಿಕೆ ಪಡೆದ ಕವನಗಳೆಲ್ಲ ತುಂಬಾ ಜನಪ್ರಿಯವಾದುವು : ಭಾಷೆ ಇಂಗ್ಲಿಷಾದರೂ ಭಾರತೀಯ ಭಾವನೆಗಳ ಆಶೆ ಆಕಾಂಕ್ಷೆಗಳ ಸುಂದರಚಿತ್ರಣ ಈ ಕವಿತೆಗಳಲ್ಲಿ ಚೆನ್ನಾಗಿ ಮೂಡಿವೆಯೆಂದು ವಿಮರ್ಶಕರು ಮೆಚ್ಚಿದರು. ತನಗೆ ಕೀರ್ತಿ ತಂದ ಕಾವ್ಯದ ಹೆಸರಾದ ಗೋಲ್ಡನ್ ತ್ರೆಷೋಲ್ಡ್ ಹೆಸರನ್ನೇ ಈಕೆ ತನ್ನ ಮನೆಗೂ ಇಟ್ಟಳು. ಈಕೆಯ ಕಾಲದ ಪಕ್ಷಿ ಕಾವ್ಯಸಂಗ್ರಹ ಗಂಭೀರ ಕೃತಿ. ಕಾಲದ ಪಕ್ಷಿ, ವಸಂತ ಪಂಚಮಿ (ವಿಧವೆಯ ದುಃಖ ಸೂಚಿಸುತ್ತದೆ) ಬಳೆಗಾರರು, ಹುಸೇನಸಾಗರ, ಹಣ್ಣು ಮುದುಕಿ - ಈ ಕವನಗಳು ಸರೋಜಿನಿಯ ಪ್ರೌಢಪ್ರಜ್ಞೆಗೆ ಸಾಕ್ಷಿಯಾಗಿವೆ. ಮೂರನೆಯ ಕವನ ಸಂಗ್ರಹ ದಿ ಬ್ರೋಕನ್ ವಿಂಗ್ (ಮುರಿದ ರೆಕ್ಕೆ) ಹೊರಬರುವ ಹೊತ್ತಿಗೆ ಸರೋಜಿನಿಯ ಆರೋಗ್ಯ ಹದಗೆಟ್ಟಿತ್ತು. ಆ ಕಾವ್ಯ ಅದರ ಪ್ರತೀಕ.  ಆ ಹೊತ್ತಿಗೆ ರಾಷ್ಟ್ರ ನಾಯಕರ ನಿಕಟ ಸಂಪರ್ಕ ಈಕೆಗೆ ಒದಗಿತ್ತು. 1915 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿನ ಕವನ ಎದ್ದೇಳು ಈ ಸಂಗ್ರಹದಲ್ಲಿದೆ. ಅಲೆಯುವ ಭಿಕ್ಷುಕರು, ಕಾಲ ಬೀಸುವ ಗಾಳಿ, ಗುಲಾಬಿಯ ಕಾಲ, ಇವು ಇದರಲ್ಲಿನ ಇತರ ಸುಂದರ ಕವಿತೆಗಳು. ಈ ಮೂರು ಕವನಗುಚ್ಛಗಳಲ್ಲಿ ಕಂಡುಬಂದ ಸರೋಜಿನಿಯ ನಾದಮಯ, ಭಾವಮಯ ಕಾವ್ಯಶಕ್ತಿಯನ್ನು ಸಾರಸ್ವತಲೋಕ ಕೊಂಡಾಡಿತು. ಲಂಡನ್ನಿನ ರಾಯಲ್ ಸೊಸೈಟ್ ಆಫ್ ಲಿಟರೆಚರ್  ಎಂಬ ಸಂಸ್ಥೆ ಈಕೆಗೆ ಗೌರವಸದಸ್ಯತ್ವ ನೀಡಿತು. ಬ್ರಿಟಿಷ್ ಸರಕಾರ ಈಕೆಗೆ ಕೈಸರ್-ಎ-ಹಿಂದ್ ಎಂಬ ಚಿನ್ನದ ಪದಕವನ್ನಿತ್ತು ಗೌರವಿಸಿತು.

	ಈ ನಡುವೆ ಸರೋಜಿನಿ ಕೇವಲ ಭಾವಜೀವಿಯಾಗಿರದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸತೊಡಗಿದ್ದಳು. ವಿಶೇಷವಾಗಿ ಸ್ತ್ರೀಯರ ಪರಿಸ್ಥಿತಿ ಸುಧಾರಣೆಗಾಗಿ ಈಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದುಂಟು. ಗೋಪಾಲಕೃಷ್ಣ ಗೋಖಲೆಯವರ ಆಹ್ವಾನದ ಮೇರೆಗೆ ಆರೋಗ್ಯ ಸುಧಾರಣೆಗೆಂದು ಈಕೆ ಪುಣೆಗೆ ಹೋದಾಗ ಒಮ್ಮೆ ಅವರು 'ಮಗು, ಚಿನ್ನದ ಹೊಸ್ತಿಲನ್ನು ದಾಟಿ ಬಂದ ಕಾಲದ ಪಕ್ಷಿ ರೆಕ್ಕೆ ಮುರಿದಿದೆಯೆಂದು ಹೆದರಬಾರದು . . . ದೀಕ್ಷೆ ತೊಡು ಮಾತುಕೊಡು ನಿನ್ನ ಸರ್ವಶಕ್ತಿ ಮಾತೃಭೂಮಿಗೆ ಮುಡಿಪು ಎಂದು ಹರಸಿದರು. ಸರೋಜಿನಿ ಹಾಗೆಯೇ ನಿರ್ಧಾರಮಾಡಿದಳು. ಈ ನಿರ್ಧಾರವೇ ಆಕೆಯನ್ನು ಕಾವ್ಯಕ್ಷೇತ್ರದಿಂದ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕ್ಷೇತ್ರಕ್ಕೆ ತಂದಿತ್ತು.

	ಆಗ್ಗೆ ಭಾರತದ ಸಾಮಾಜಿಕ, ರಾಜಕೀಯ ಜೀವನ ಪ್ರಕ್ಷುಬ್ಧವಾಗಿತ್ತು.  ಹಿಂದೂ ಮುಸಲ್ಮಾನರಲ್ಲಿ ವೈಷಮ್ಯ ಹೆಚ್ಚುತ್ತಿತ್ತು. ರಾಜಕೀಯ ಪಕ್ಷಗಳಲ್ಲಿಯೂ ಏಕತೆ ಇರಲಿಲ್ಲ. 1913 ರಲ್ಲಿ ಲಖ್‍ನೌದಲ್ಲಿ ಸೇರಿದ ಮುಸ್ಲಿಂ ಲೀಗಿನ ಅಧಿವೇಶನದಲ್ಲಿ ಏಕಮಾತ್ರ ಹಿಂದೂ ಆದ ಸರೋಜಿನಿ ಭಾಷಣ ಮಾಡಿದಳು. ಹಿಂದೂ ಮುಸ್ಲಿಂ ಐಕ್ಯಕ್ಕಾಗಿ ಕರೆಯಿತ್ತಳು. 1915ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವರಾಜ್ಯದ ಬಗ್ಗೆ ಭಾಷಣ ಮಾಡಿ ರಾಜಕೀಯ ಜೀವನ ಪ್ರಾರಂಭಿಸಿದಳು.

	1914 ರಲ್ಲಿ ದಕ್ಷಿಣ ಆಫ್ರಿಕಾದ ಚಳುವಳಿ ಹೂಡಿ ಬಂಧಿತರಾಗಿ ಬಿಡುಗಡೆಯಾದ ಅನಂತರ ಗಾಂಧೀಜಿ, ಗೋಖಲೆಯವರೊಂದಿಗೆ ಸಮಾಲೋಚನೆಗಾಗಿ ಪತ್ನೀ ಸಮೇತ ಲಂಡನ್ನಿಗೆ ಬಂದಾಗ ಸರೋಜಿನಿ ಗಾಂಧಿಯವರನ್ನು ಮೊದಲ ಬಾರಿಗೆ ಕಂಡು ಪ್ರಭಾವಿತೆಯಾಗಿ ಅವರ ಮೆಚ್ಚಿಗೆಯ ಶಿಷ್ಯೆಯಾದಳು.
1915 ರಲ್ಲಿ ಸರೋಜಿನಿ ದೇವಿಯ ತಂದೆ ಕಲ್ಕತ್ತೆಯಲ್ಲಿ ತೀರಿಕೊಂಡರು.
1919ರ ಲಖ್‍ನೌ ಕಾಂಗ್ರೆಸ್ ಅಧಿವೇಶನದಲ್ಲಿ ಅದೇ ಜಾರಿಗೆ ಬಂದಿದ್ದ ಶಸ್ತ್ರಾಸ್ತಗಳ ಕಾನೂನನ್ನು ವಿರೋಧಿಸುವ ಗೊತ್ತುವಳಿಯ ಮೇಲೆ ಮಾತನಾಡಿದ ಸರೋಜಿನಿ ಸಭೆಗೆ ಬಂದಿದ್ದ ಗೌರ್ನರನ ಎದುರಿನಲ್ಲಿಯೇ ಅದನ್ನು ಖಂಡಿಸಿದಳು. ಇದೇ ಕಾಲದಲ್ಲಿ ಅಲಹಾಬಾದಿನಲ್ಲಿ ಈಕೆ ಮಾಡಿದ ಭಾಷಣವನ್ನು ಮೊದಲ ಬಾರಿ ಕೇಳಿದ ಜವಾಹರ್‍ಲಾಲ್ ನೆಹರು ಬಹಳ ಮೆಚ್ಚಿಕೊಂಡರು. 1918 ರಲ್ಲಿ ಮದ್ರಾಸಿನಲ್ಲಿ ನಡೆದ ಪ್ರಾಂತ ಸಮ್ಮೇಳನಕ್ಕೆ ಈಕೆ ಅಧ್ಯಕ್ಷೆಯಾದಳು. 1919 ರಲ್ಲಿ ಜಾರಿಗೆ ಬಂದ ರೌಲೆಟ್ ಕಾಯಿದೆಯನ್ನು ವಿರೋಧಿಸಲು ಗಾಂಧೀಜಿ, ಸರದಾರ ಪಟೇಲರೊಂದಿಗೆ ಸರೋಜಿನಿ ಇಡೀ ಭಾರತದಲ್ಲಿ ಸಂಚರಿಸಿದಳು. ಸತ್ಯಾಗ್ರಹಗಳು ನಡೆದವು. ಅಮೃತಸರದಲ್ಲಿ ಪೋಲಿಸರು ಹತ್ಯಾಕಾಂಡ ನಡೆಸಿದರು. ಈ ನಡುವೆ ಚಿಕಿತ್ಸೆಗಾಗಿ ಲಂಡನ್ನಿಗೆ ಹೋದ ಸರೋಜಿನಿ ಅಲ್ಲಿಯ ಸಾರ್ವಜನಿಕ ಸಭೆಗಳಲ್ಲಿ ಬ್ರಿಟಿಷರ ದುರ್ವರ್ತನೆಯನ್ನು ತೀವ್ರವಾಗಿ ಪ್ರತಿಭಟಿಸಿದಳು.

	ಇಂಗ್ಲೆಂಡಿನಿಂದ ಮರಳಿದ ಸರೋಜಿನಿ ಖಾದಿ ಭಕ್ತಳಾದಳು. ವಿದೇಶೀ ವಸ್ತ್ರ ತ್ಯಾಗದ ಪ್ರಚಾರ ಕೈಗೊಂಡಳು. 1921 ರಲ್ಲಿ ಭಾರತಕ್ಕೆ ಭೇಟಿ ಕೊಟ್ಟ ಪ್ರಿನ್ಸ್ ಆಫ್ ವೇಲ್ಸ್ ರಾಜಕುಮಾರನ ಭೇಟಿಯನ್ನು ವಿರೋಧಿಸಿದ ನಾಯಕರೊಂದಿಗೆ ಈಕೆಯೂ ಸೆರೆಮನೆ ಸೇರಿ ಒಂದು ವರ್ಷ ಶಿಕ್ಷೆ ಅನುಭವಿಸಿ ಹೊರಬಂದಳು. ಕಾನ್ಪುರದ 1925 ರ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷಳಾಗಿ ಆಯ್ಕೆಯಾದಾಗ ಇಡೀ ರಾಷ್ಟ್ರವೇ ಈಕೆಯನ್ನು ಗೌರವಿಸಿತು. ಗಾಂಧೀಜಿ ಮನಸಾರೆ ಈಕೆಯ ಸೇವೆಯನ್ನು ಪ್ರಶಂಸಿಸಿದರು. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷೆಯಾದ ಈಕೆ ಬಹು ಸಮರ್ಥ ಧುರೀಣಳೆಂದು ಹೆಸರಾದಳು.

	ಅಮೇರಿಕಾ ಮತ್ತು ಆಫ್ರಿಕಾಗಳಲ್ಲಿ ಸಂಚರಿಸಿ ಸರೋಜಿನಿದೇವಿ ಅಲ್ಲಿದ್ದ ಭಾರತೀಯರ ಹಕ್ಕುಬಾಧ್ಯತೆ ಮತ್ತು ವಸಾಹತುಶಾಹಿ ದೌರ್ಜನ್ಯದ ಬಗ್ಗೆ ಜನರನ್ನು ಎಚ್ಚರಿಸಿದಳು. ಭಾರತದಲ್ಲಿ ಸ್ವಾತಂತ್ರ್ಯದ ಬೇಡಿಕೆ ಮುಂದುವರಿಯಿತು. 1930ರ ಜನವರಿ 26ರಂದು ಕಾಂಗ್ರೆಸ್ಸು ಸ್ವಾತಂತ್ರ್ಯದ ಪ್ರತಿಜ್ಞೆ ಸ್ವೀಕರಿಸಿ ಹೋರಾಟ ಆರಂಭಿಸಿತು. ಗಾಂಧೀಜಿ ಜೊತೆಗೆ ಈಕೆ ಉಪ್ಪಿನ ಸತ್ಯಾಗ್ರಹದ ಮುಖಂಡತ್ವ ವಹಿಸಿದಳು. ಸರ್ಕಾರ ಶಕ್ತಿ ಪ್ರದರ್ಶನದ ದೌರ್ಜನ್ಯ ಮಾಡಿತು.  ಯಾರೂ ಹೆದರಲಿಲ್ಲ. ಲಕ್ಷಾಂತರ ಜನ ಸತ್ಯಾಗ್ರಹಿಗಳು ಜೈಲು ಸೇರಿದರು. ಈ ಜನಜಾಗೃತಿ ಬ್ರಿಟೀಷ್ ಸರ್ಕಾರದ ಚಿಂತೆಯನ್ನು ಹೆಚ್ಚಿಸಿತು. ಮರುವರ್ಷ ಎಲ್ಲರನ್ನು ಸೆರೆಮನೆಯಿಂದ ಬಿಟ್ಟು ಲಂಡನ್ನಿನಲ್ಲಿ ಮಾತುಕತೆಗಾಗಿ ಬ್ರಿಟೀಷ್ ಸರ್ಕಾರ ದುಂಡುಮೇಜಿನ ಪರಿಷತ್ತನ್ನು ಕರೆದಾಗ ಗಾಂಧೀಜಿಯ ಜೊತೆಗೆ ಈಕೆ ಭಾರತೀಯ ಸ್ತ್ರೀ ಪ್ರತಿನಿಧಿಯಾಗಿ ಲಂಡನ್ನಿಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗಿ ಬಂದ ನಾಲ್ಕೈದು ದಿನಗಳಲ್ಲಿ ಗಾಂಧೀಜಿಯವರೊಂದಿಗೆ ಈಕೆಯನ್ನು ಬಂಧಿಸಲಾಯಿತು.

	1933 ರಲ್ಲಿ ಸರೋಜಿನಿ ಅಂತರಾಷ್ಟ್ರೀಯ ಪಿ.ಇ.ಎನ್. ಎಂಬ ಸಾಹಿತಿಗಳ ಸಂಸ್ಥೆಯ ಉಪಾಧ್ಯಕ್ಷೆಯಾದಳು. 1941 ರಲ್ಲಿ ಆ ಸಂಸ್ಥೆಯ ಅಧ್ಯಕ್ಷೆಯೂ ಆದಳು. 

	ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರ ಈಕೆಯನ್ನು ಉತ್ತರ ಪ್ರದೇಶದ ಗೌರ್ನರ್ ಆಗಿ ನೇಮಿಸಿ ಗೌರವಿಸಿತು. 1947 ರಲ್ಲಿ ಏಷ್ಯ ದೇಶಗಳ ಪ್ರಥಮ ಸಮ್ಮೇಳನಕ್ಕೆ ಈಕೆ ಅಧ್ಯಕ್ಷೆಯಾದಳು. ಏತನ್ಮಧ್ಯೆ ನಡೆದ ಗಾಂಧೀಜಿಯ ಕೊಲೆ ವಯಸ್ಸಾದ ಈಕೆಯ ಮೇಲೆ ದೊಡ್ಡ ಆಘಾತವನ್ನೇ ಮಾಡಿತು.

	ತಾನು ಗವರ್ನರ್ ಅಲ್ಲ ಗವರ್ನೆಸ್ ಎಂದು ಹಾಸ್ಯಕ್ಕಾಗಿ ಸರೋಜಿನಿ ಹೇಳುತ್ತಿದ್ದುದುಂಟು. ಗಾಂಧೀಜಿಯನ್ನು ಮಿಕ್ಕಿಮೌಸ್ ಎಂದು ಗೇಲಿ ಮಾಡುವ ಧೈರ್ಯ ಈಕೆಯದು. ವಯಸ್ಸು ಸ್ಥಾನಗಳು ಈಕೆಯ ವಿನೋಧ ಸ್ವಭಾವಕ್ಕೆ ಎಂದೂ ಅಡ್ಡಬರಲಿಲ್ಲ. ಭಾರತಾದ್ಯಂತ ನಿಲ್ಲಿಸಿರುವ ವಿಕ್ಟೋರಿಯಾ ರಾಣಿಯ ಮೂರ್ತಿಗಳನ್ನೇನು ಮಾಡಬೇಕು-ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ- ಎಂದು ಇಂಗ್ಲೆಂಡಿನಲ್ಲಿ ಒಮ್ಮೆ ಯಾರೋ ಕೇಳಿದಾಗ ಈಕೆ ಸಲ್ಪವೂ ತಡವರಿಸದೆ ಆ ಮೂರ್ತಿಗಳ ತಲೆಗಳನ್ನೆಲ್ಲಾ ಕಡಿದು ತನ್ನ ತಲೆಗಳನ್ನಲ್ಲಿ ಇಡಬೇಕು ಎಂದು ಹೇಳಿದಳಂತೆ. ಈ ಸಂಗತಿ ನಡೆದುದು ಭಾರತದಲ್ಲಿ ಇನ್ನೂ ಬ್ರಿಟೀಷ್ ಆಳ್ವಿಕೆ ಇದ್ದಾಗ.

	ಸರೋಜಿನಿ ಭಾಗವಹಿಸಿದ ಕೊನೆಯ ಸಮಾರಂಭವೆಂದರೆ 1949 ನೆಯ ಜನವರಿ 28ರಲ್ಲಿ ನಡೆದ ಲಖ್‍ನೌ ವಿಶ್ವವಿದ್ಯಾಲಯದ ಪದವೀದಾನ ಮಹೋತ್ಸವ. ನೆಹರೂ ಹಾಗೂ ಡಾಕ್ಟರ್ ಕಟ್ಟು ಅವರಿಗೆ ಆಗ ಡಾಕ್ಟರೇಟ್ ಪದವಿಯನ್ನು ಈಕೆಯ ಅಧ್ಯಕ್ಷತೆಯಲ್ಲಿ ಕೊಡಲಾಯಿತು. ಬೇನೆಯಿಂದ ಹಾಸಿಗೆ ಹಿಡಿದಿದ್ದ ಸರೋಜಿನಿದೇವಿ ಅದೇ ವರ್ಷದ ಮಾರ್ಚಿ 2 ರಂದು ಉತ್ತರಪ್ರದೇಶದ ರಾಜಭವನದಲ್ಲಿ ತನ್ನ ಕೊನೆಯುಸಿರೆಳೆದಳು.
(ಜೆ.ಆರ್.ಪಿ.;ಎಂ.ವಿ.ಎಸ್‍ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ